ನಾವು ಸೇವಿಸುವ ಆಹಾರ ಕಲಬೆರೆಕೆ ಆಗಿದೆಯೇ ಆಗಿದ್ದಲ್ಲಿ ಅವುಗಳ ಪತ್ತೆ ಹಚ್ಚುವ ಕೆಲವು ವಿಧಾನ ಇಲ್ಲಿದೆ

ದೇಹಕ್ಕೆ ಯಾವುದೇ ಸಮಸ್ಯೆಯಾದರೂ ಅದಕ್ಕೆ ಹೆಚ್ಚಿನ ಕಾರಣವೆಂದರೆ ನಾವು ಸೇವಿಸುವ ಆಹಾರ. ನಮ್ಮ ಆಹಾರ ಕ್ರಮದಲ್ಲಿ ಸ್ವಲ್ಪವೇ ವ್ಯತ್ಯಯ ವಾದರೂ ನಾವು ಊಟ ನಿದ್ದೆ ಬಿಟ್ಟು ಹೆಣಗಬೇಕಾಗುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಸಿಕ್ಕಿಲ್ಲವೆಂದರೂ ದೇಹ ಬಳಲುತ್ತದೆ. ಆರೋಗ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿ ಪೌಷ್ಟಿಕ ಆಹಾರಗಳನ್ನೇ ಸೇವಿಸದೆ ಇರುವುದರಿಂದ ಮುಂದೊಮ್ಮೆ ನಾವು ತೀರಾ ಕಷ್ಟಪಡಬೇಕಾಗುತ್ತದೆ. ಅನಾರೋಗ್ಯ ಉಂಟಾದಾಗ ನಾವು ವೈದ್ಯರ ಬಳಿ ಹೋದರೆ ಅವರು ನೀಡುವ ಮೊದಲ ಸಲಹೆ ಎಂದರೆ ಪೌಷ್ಟಿಕ ಆಹಾರ ಸೇವಿಸಿ ಎಂಬುದೇ ಆಗಿರುತ್ತದೆ.

ಆದರೆ ಪೌಷ್ಟಿಕ ಆಹಾರವೆಂದರೆ ಯಾವುದು? ಅದು ಹೇಗಿರಬೇಕು? ಇಂದು ಮಾರುಕಟ್ಟೆಯಲ್ಲಿ ಸಿಗುತ್ತಿ ರುವ ಆಹಾರಗಳಲ್ಲಿ ಪೌಷ್ಟಿಕವಾದವು ಎಷ್ಟಿವೆ… ಎಂಬ ಬಗ್ಗೆ ಯೋಚಿಸಿದರೆ ದಿಗಿಲಾಗುತ್ತದೆ. ವೈದ್ಯರೇ ಹೇಳುವಂತೆ ಹಣ್ಣು – ತರಕಾರಿಯನ್ನೇ ಇಡೀ ದಿನ ಸೇವಿಸುತ್ತಿದ್ದರೆ ಆರೋಗ್ಯ ಸರಿಹೋದೀತೇ? ಇಂದಿನ ಕಲಬೆರಕೆಯುಗದಲ್ಲಿ ಯಾವ ಆಹಾರ ವನ್ನು ಪೌಷ್ಟಿಕವೆಂದು ನಂಬುವುದು ಎಂಬ ಗೊಂದಲ ಕಾಡಬಹುದು. ಹಣ್ಣು ತರಕಾರಿಗಳೂ ರಾಸಾಯನಿಕಗಳಿಂದ ಹೊರತಾಗಿಲ್ಲ. ಇವನ್ನೆಲ್ಲ ಸೇವಿಸಿದರೇ ಸಮಸ್ಯೆ ಎಂಬ ಹಂತಕ್ಕೆ ಹಲವರು ಬಂದಿದ್ದಾರೆ. ನೀವು ಖರೀದಿಸುವ ಕೆಲವು ಆಹಾರ ಪದಾರ್ಥಗಳು ಶುದ್ಧವೋ ಅಲ್ಲವೋ ಎಂಬುದನ್ನು ನೀವೇ ಪರೀಕ್ಷಿಸಬಹುದು.

*ಬಟಾಣಿ: ಬೆಳಿಗ್ಗೆ ಪಲಾವ್ ಮಾಡಬೇಕೆಂದುಕೊಂಡಿರುವ ನಿಮಗೆ ರಾತ್ರಿ ಬಟಾಣಿ ನೆನೆಸುವುದು ಮರೆತುಹೋಗಿರುತ್ತದೆ. ಇನ್ನೇನು ಮಾಡೋದು ಅಂತ ಬೆಳಗ್ಗೆ ಅಂಗಡಿಯಿಂದ ಹಸಿ ಬಟಾಣಿ ತರುತ್ತೀರಿ. ಅದನ್ನೊಮ್ಮೆ ತೊಳೆದು ನೋಡಿ. ಅದು ಹಸಿರು ಬಣ್ಣ ಬಿಡುತ್ತದೆ. ಹಾಗೆ ಬಣ್ಣ ಬಿಟ್ಟರೆ ಬಟಾಣಿ ಉತ್ತಮ ವಾದದ್ದಲ್ಲ ಎಂಬುದನ್ನು ತಿಳಿಯಿರಿ. ಮತ್ತೊಮ್ಮೆ ಅಂಥ ಬಟಾಣಿಯನ್ನು ಖರೀದಿಸಬೇಡಿ.

*ಸೇಬು: ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ಭೇಟಿ ಮಾಡುವ ಅಗತ್ಯ ಬರುವುದಿಲ್ಲ ಎಂಬ ಮಾತಿದೆ. ಆದರೆ ಇಂದಿನ ಸೇಬು ತಿಂದರೆನೇ ವೈದ್ಯರ ಬಳಿ ಹೋಗಬೇಕಾದ ಪರಿಸ್ಥಿತಿ ಬರಬಹುದು. ಏಕೆಂದರೆ ಸೇಬಿಗೆ ಬಣ್ಣ ಬರಲೆಂದು ಮೇಣವನ್ನು ಉಪಯೋಗಿಸಲಾಗುತ್ತದೆ. ಈ ಮೇಣ ಖಂಡಿತವಾಗಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ಚೂಪಾದ ಚಾಕುವನ್ನು ತೆಗೆದುಕೊಂಡು ಸೇಬಿನ ಮೇಲೆ ಗೀಚಿದಂತೆ ಮಾಡಿ. ಆಗ ಬಿಳಿ ಗೆರೆಗಳಾದರೆ ಸೇಬುಗೆ ಮೇಣ ಬಳಿಯಲಾಗಿದೆ ಎಂದರ್ಥ.

*ಜೀರಿಗೆ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಸಾಂಬಾರ ಪದಾರ್ಥ. ಆದರೆ ತೂಕ ಹೆಚ್ಚಾಗಲೆಂದು ಜೀರಿಗೆಗೆ ಇದ್ದಿಲಿನ ಪುಡಿಯನ್ನು ಮಿಶ್ರಣ ಮಾಡಲಾಗುತ್ತದೆ. ಸ್ವಲ್ಪ ಜೀರಿಗೆಯನ್ನು ಕೈಯಲ್ಲಿ ಹಿಡಿದು ಉಜ್ಜಿ. ನಿಮ್ಮ ಕೈ ಕಪ್ಪಾದರೆ ಅದಕ್ಕೆ ಇದ್ದಿಲನ್ನು ಮಿಶ್ರಣ ಮಾಡಲಾಗಿದೆ ಎಂದರ್ಥ.

*ಅರಿಶಿಣ ಕೊಂಬು:ಅರಿಶಿಣ ಕೊಂಬು ಸಾಂಪ್ರದಾಯಿಕವಾಗಿ ಪ್ರಸಿದ್ಧಿ ಪಡೆದಿರುವಷ್ಟೇ ಸಾಂಬಾರ ಪದಾರ್ಥವಾಗಿಯೂ ಪ್ರಸಿದ್ಧ. ಆದರೆ ಇಂದು ಅರಿಶಿಣ ಕೊಂಬಿಗೆ ಬಣ್ಣವನ್ನು ಮೆತ್ತಲಾಗುತ್ತಿದೆ. ಅದನ್ನು ತಿಳಿಯಬೇಕೆಂದರೆ ಅರಿಶಿಣ ಕೊಂಬನ್ನು ಹರಿಯುತ್ತಿರುವ ನೀರಿಗೆ ಹಿಡಿದು ನೋಡಿ, ನೀರು ಹಳದಿ ಬಣ್ಣ ಬಂದರೆ ಅರಿಶಿಣ ಅಶುದ್ಧವೆಂದರ್ಥ.

*ಟೀ: ಟೀ ಎಲೆ ಸಹ ಕಲಬೆರಕೆಗೆ ಹೊರತಾಗಿಲ್ಲ. ಅದನ್ನು ತಿಳಿಯಲು ಒಂದು ಟೀ ಸ್ಪೂನ್ ಚಹದ ಪುಡಿಯನ್ನು ನೀರಿಗೆ ಹಾಕಿ ಸ್ವಲ್ಪ ಸಮಯ ಬಿಡಿ. ನೀರು ಕಂದು ಬಣ್ಣಕ್ಕೆ ತಿರುಗಿದರೆ ಟೀ ಕಲಬೆರಕೆಗೊಂಡಿದೆ ಎಂದೇ ಅರ್ಥ..

 

SHARE