ಮತ್ತೆ ನಿಮ್ಮನೆಲ್ಲ ಮನರಂಜಿಸಲು ಬರ್ತಿದ್ದಾನೆ ಸಿಹಿ ಕಹಿ ಚಂದ್ರು ನಿರ್ದೇಶನದ ‘ಪಾಪ ಪಾಂಡು’

ಈ ಧಾರಾವಾಹಿಯನ್ನು ನೋಡದವರೆ ಇಲ್ಲ ಎಂದು ಹೇಳಬಹುದೆನೋ ಅಷ್ಟರ ಮಟ್ಟಿಗೆ ಈ ಸೀರಿಯಲ್ ದೊಡ್ಡ ಜನಪ್ರಿಯತೆಗಳಿಸಿತ್ತು. ಧಾರಾವಾಹಿಗಳ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದವರನ್ನು ಕೂಡ ದಿನ ಟಿವಿ ಮುಂದೆ ಕೂರಿಸುವಂತೆ ಮಾಡಿದ್ದ ಸೀರಿಯಲ್ ಗಳಲ್ಲಿ ‘ಪಾಪ ಪಾಂಡು’ ಪ್ರಮುಖವಾಗಿತ್ತು. ವಿಶೇಷ ಅಂದರೆ ಈಗ 15 ವರ್ಷ ನಂತರ ಮತ್ತೆ ಇದೀಗ ನಿಮ್ಮನ್ನು ನಗಿಸಲು ಹೊಸ ‘ಪಾಪಾ ಪಾಂಡು’ ಬರುತ್ತಿದ್ದಾನೆ.

‘ಪಾಪ ಪಾಂಡು’ ಧಾರಾವಾಹಿ ಈಗ ಮತ್ತೆ ಬರುತ್ತಿದೆ. ಈ ಬಗ್ಗೆ ಧಾರಾವಾಹಿಯ ನಿರ್ಮಾಪಕರಾಗಿರುವ ಸಿಹಿ ಕಹಿ ಚಂದ್ರು ‘ಫಿಲ್ಮಿಬೀಟ್ ಕನ್ನಡ’ದ ಜೊತೆಗೆ ಮಾತನಾಡಿದ್ದಾರೆ. ”ಮತ್ತೆ ‘ಪಾಪಾ ಪಾಂಡು’ ಧಾರಾವಾಹಿಯನ್ನು ತರುತ್ತಿದ್ದೇವೆ. ಇದು ‘ಪಾಪಾ ಪಾಂಡು’ ಸೀಸನ್ 2 ಎಂದು ಹೇಳಬಹುದು. 15 ವರ್ಷದ ನಂತರ ಆ ಧಾರಾವಾಹಿ ಏನಾಗುತ್ತದೆ ಎನ್ನುವುದನ್ನು ಇಟ್ಟುಕೊಂಡು ಮತ್ತೆ ಜನರ ಮುಂದೆ ಬರುತ್ತಿದ್ದೇವೆ.” ಎಂದು ಹೇಳಿದ ಅವರು ಸದ್ಯದಲ್ಲಿಯೇ ಧಾರಾವಾಹಿಯ ಎಲ್ಲ ವಿವರಗಳನ್ನು ತಿಳಿಸಲಿದ್ದಾರಂತೆ.

ಇನ್ನು ಈ ಧಾರಾವಾಹಿಯ ಬಗ್ಗೆ ತುಂಬ ದೊಡ್ಡ ನಿರೀಕ್ಷೆ ಇರುವ ಕಾರಣ ತುಂಬ ಕಷ್ಟ ಪಟ್ಟು ಕೆಲಸ ಮಾಡಲಾಗುತ್ತಿದೆಯಂತೆ. ಈ ಬಾರಿಯ ‘ಪಾಪಾ ಪಾಂಡು’ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಅಂದಹಾಗೆ, ಆಗ ‘ಪಾಪಾ ಪಾಂಡು’ ಧಾರಾವಾಹಿ ಈ ಟಿವಿ ಕನ್ನಡದಲ್ಲಿ ಪ್ರಸಾರ ಆಗುತ್ತಿತ್ತು. ‘ಪಾಪ ಪಾಂಡು’ ಆಗಿ ಚಿದಾನಂದ್ ಹಾಗೂ ಅವರ ಶ್ರೀಮತಿ ಆಗಿ ಶಾಲಿನಿ ಕಾಣಿಸಿಕೊಂಡಿದ್ದರು.

SHARE