ಮಾರುಕಟ್ಟೆಗೆ ಪತಂಜಲಿ ಸಿಮ್ ಕಾರ್ಡ್‌ಗಳು… ಸಿಮ್ ತೆಗೆದುಕೊಂಡರೆ 5 ಲಕ್ಷ ಆಫರ್..

ಯೋಗ ಗುರು ಬಾಬಾ ರಾಮ್‌ದೇವ್ ಪತಂಜಲಿ ಹೆಸರಿನಲ್ಲಿ ಕಂಪೆನಿಯನ್ನು ಸ್ಥಾಪಿಸಿ ದೇಸಿ ಉತ್ಪನ್ನಗಳನ್ನು ತಯಾರಿಸುತ್ತಾ ಒಳ್ಳೆಯ ಬ್ರ್ಯಾಂಡ್ ಎಂದು ಹೆಸರು ಮಾಡಿತು. ಆದರೆ ಈಗ ಅವರು ಟೆಲಿಕಾಂ ಕ್ಷೇತ್ರಕ್ಕೂ ಅಡಿಯಿಡಲು ಸಿದ್ಧರಾಗಿದ್ದಾರೆ. ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್‌ ಹೆಸರಿನಲ್ಲಿ ಪತಂಜಲಿ ಸಿಮ್ ಕಾರ್ಡ್‌ಗಳನ್ನು ಅದ್ದೂರಿಯಾಗಿ ಲಾಂಚ್ ಮಾಡಿದ್ದಾರೆ. ಇದಕ್ಕಾಗಿ ಸರಕಾರಿ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಎರಡು ಕಂಪೆನಿಗಳು ಕೈ ಜೋಡಿಸಿ ಸ್ವದೇಸಿ-ಸಮೃದ್ಧಿ ಸಿಮ್‍ಕಾರ್ಡ್‌ಗಳನ್ನು ಮಾರುಕಟ್ಟೆ ಬಿಡುಗಡೆ ಮಾಡುತ್ತಿವೆ.

ಪತಂಜಲಿ ಕಂಪೆನಿ ನೀಡುವ ಸಿಮ್‌ಕಾರ್ಡ್‌ಗಳಿಂದ ಕೇವಲ ರೂ.144ಕ್ಕೆ ರೀಚಾರ್ಜ್ ಮಾಡಿಕೊಂಡರೆ ದೇಶದಾದ್ಯಂತ ಅಪರಿಮಿತ ಕರೆಗಳನ್ನು ಮಾಡಿಕೊಳ್ಳಬಹುದು. 2ಜಿಬಿ ಡಾಟಾ ಪ್ಯಾಕ್ ಜತೆಗೆ 100 ಎಸ್‌ಎಂಎಸ್ ಸಹ ಕಳುಹಿಸಿಕೊಳ್ಳುವ ಸಾಧ್ಯತೆ ಇದೆ. ಮೊದಲು ಈ ಸಿಮ್ ಕಾರ್ಡ್‌ಗಳನ್ನು ಪತಂಜಲಿ ಕಂಪೆನಿಯ ಉದ್ಯೋಗಿಗಳಿಗೆ, ಅಧಿಕಾರಿಗಳಿಗೆ ಮಾತ್ರ ನೀಡಲಿದ್ದಾರೆ. ಬಳಿಕ ಸ್ವಲ್ಪ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿವೆ. ಪೂರ್ಣಪ್ರಮಾಣದಲ್ಲಿ ಲಭ್ಯವಾದ ಬಳಿಕ ಈ ಕಾರ್ಡ್ ಬಳಸಿ ಗ್ರಾಹಕರು ಪತಂಜಲಿ ಉತ್ಪನ್ನಗಳ ಮೇಲೆ ಶೇ.10ರಷ್ಟು ಡಿಸ್ಕೌಂಟ್ ಸಹ ಪಡೆಯಬಹುದು.

ಇದಿಷ್ಟೇ ಅಲ್ಲದೆ ಪತಂಜಲಿ ಸಿಮ್ ಕಾರ್ಡ್ ಬಳಸುವ ಗ್ರಾಹಕರು 2.5 ಲಕ್ಷದಿಂದ 5 ಲಕ್ಷದವರೆಗೂ ಆರೋಗ್ಯ, ಅಪಘಾತ, ಜೀವವಿಮೆಯನ್ನು ಸಹ ಜನರಿಗೆ ನೀಡುತ್ತೇವೆ ಎಂದು ಬಾಬಾ ರಾಮ್‌ದೇವ್ ತಿಳಿಸಿದ್ದಾರೆ. ದೇಶದ ಒಳಿತಿಗಾಗಿ ಸ್ವದೇಶಿ ಸಂಸ್ಥೆಯಾದ ಬಿಎಸ್‍ಎನ್‍ಎಲ್ ಜತೆಗೆ ಕೈಜೋಡಿಸಿದ್ದೇವೆಂದು, ನಮ್ಮಿಬ್ಬರ ಉದ್ದೇಶ ಒಂದೇ ಎಂದು ಸ್ಪಷ್ಟಪಡಿಸಿದ್ದಾರೆ ರಾಮ್ ದೇವ್. ಇದುವರೆಗೆ ಟೆಲಿಕಾಂ ಕ್ಷೇತ್ರಕ್ಕೆ ಅನೇಕ ಕಂಪೆನಿಗಳು ಅಡಿಯಿಟ್ಟಿವೆ. ಆದರೆ ಪತಂಜಲಿ ಮಾದರಿಯಲ್ಲಿ ವಿಮೆಗೆ ಕನೆಕ್ಟ್ ಮಾಡುವ ಸಿಮ್ ಕಾರ್ಡ್‌ಗಳು ಮಾತ್ರ ಇದುವರೆಗೆ ಬಂದಿರಲಿಲ್ಲ. ಲೇಟಾಗಿ ಬಂದರೂ ಲೇಟೆಸ್ಟ್ ಆಗಿ ಬಂದಿದ್ದೇವೆಂದು ಎಂದು ಎಂಟ್ರಿ ಕೊಟ್ಟ ರಿಲಯನ್ಸ್ ಜಿಯೋ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಎಲ್ಲಾ ಉಚಿತ ಎಂದು ವರ್ಷಪೂರ್ತಿ ಉಚಿತ ಆಫರ್‌ಗಳ ಮೂಲಕ ರಂಜಿಸಿದ ಜಿಯೋ ಎಲ್ಲಾ ನೆಟ್‌ವರ್ಕ್ ಕಂಪೆನಿಗಳಿಗೆ ಸಾಕಷ್ಟು ಹೊಡೆತ ನೀಡಿತು. ಇನ್ನು ಪತಂಜಲಿ ಸಿಮ್‍ಗಳ ಹವಾ ಹೇಗಿರುತ್ತದೋ ಗೊತ್ತಾಗಬೇಕಾದರೆ ಸ್ವಲ್ಪ ದಿನಗಳ ಕಾಲ ಕಾಯಬೇಕು.

SHARE